ನಡೆಯುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದರೆ ಈ ಬೇಸಿಗೆ ಕಾಲದಲ್ಲಿ ಸಂಜೆ ಹೊತ್ತು ನಡೆಯುವ ವ್ಯಾಯಾಮ ಮಾಡಿದರೆ ಇನ್ನೂ ಒಳ್ಳೆಯದು. ಸಂಜೆ ಹೊತ್ತು ವ್ಯಾಯಾಮ ಮಾಡುವುದರಿಂದ ಸ್ನಾಯುಗಳನ್ನು ಬಲಪಡಿಸಲು ಸಹಕಾರಿ. ನಡೆಯುವುದರಿಂದ ತೂಕ ನಿಯಂತ್ರಣದ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಇನ್ನು ಈ ಪ್ರಯೋಜನಗಳನ್ನೂ ಪಡೆಯಬಹುದು:
ಸಂಜೆ ಹೊತ್ತು ತಂಪಾಗಿರುತ್ತದೆ:
ಸಂಜೆ 5 ಗಂಟೆಯ ಮೇಲೆ ವಾತಾವರಣ ಸ್ವಲ್ಪ ತಂಪಾಗಿರುತ್ತದೆ, ಆದ್ದರಿಂದ ಸಂಜೆ ಹೊತ್ತು ನಡೆಯುವುದರಿಂದ ಸುಸ್ತಾಗುವುದಿಲ್ಲ, ಒಂದೆರಡು ಕಿ.ಮೀ ಹೆಚ್ಚೇ ನಡೆಯಬಹುದು.
ನಿದ್ದೆ ಚೆನ್ನಾಗಿ ಬರುತ್ತದೆ:
ಸಂಜೆ ನಡೆದಾಗ ರಾತ್ರಿ ಮಲಗಿದ ತಕ್ಷಣ ನಿದ್ದೆ ಬರುವುದು, ಸೆಕೆಗೆ ನಿದ್ದೆ ಬರಲ್ಲ ಎಂಬ ಹಿಂಸೆ ಇರಲ್ಲ, ಮಲಗಿದ ತಕ್ಷಣ ಸುಖ ನಿದ್ದೆ ಬರುತ್ತದೆ.
ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ:
ಬೆಳಗ್ಗೆಯಿಂದ ಸಂಜೆವರೆಗೆ ಕೆಲಸದಲ್ಲಿ ಮಾನಸಿಕ ಒತ್ತಡ ಹೆಚ್ಚಿರುತ್ತದೆ. ಒಂದು ಅರ್ಧ ಗಂಟೆ ನಡೆದು ನಂತರ 10 ನಿಮಿಷ ಧ್ಯಾನ ಮಾಡಿದರೆ ಮಾನಸಿಕ ಒತ್ತಡ ಕಡಿಮೆಯಾಗುವುದು.
ಹೃದಯದ ಆರೋಗ್ಯಕ್ಕೆ ಒಳ್ಳೆಯದು:
ನಡೆಯುವ ವ್ಯಾಯಾಮ ಮಾಡುವುದರಿಂದ ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಅಲ್ಲದೆ ಮೈ ತೂಕ ಕೂಡ ನಿಯಂತ್ರಣದಲ್ಲಿ ಸಹಾಯ ಮಾಡುತ್ತದೆ, ಇದರಿಂದ ಒಟ್ಟು ಮೊತ್ತ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಇನ್ನು ಬೇಸಿಗೆಯಲ್ಲಿ ವ್ಯಾಯಾಮ ಮಾಡುವಾಗ ಈ ಅಂಶಗಳ ಬಗ್ಗೆ ಗಮನಿಸಿ:
ನೀವು ಸಂಜೆ 4 ಗಂಟೆ ಮೇಲೆ ವ್ಯಾಯಾಮ ಮಾಡಬೇಕು, ನೀವು ಮನೆಯ ಒಳಗಡೆ ವ್ಯಾಯಾಮ ಮಾಡುವುದಾದರೂ ಸರಿ 4 ಗಂಟೆಯ ವ್ಯಾಯಾಮ ಮಾಡಿ, ಈಗ ನಾಲ್ಕು ಗಂಟೆಗೂ ಬಿಸಿಲಿನ ಉರಿ ಇದೆ, ಹಾಗಾಗಿ 5 ಗಂಟೆಯ ನಂತರದ ಸಮಯ ಒಳ್ಳೆಯದು.
ದೇಹದಲ್ಲಿ ನೀರಿನಂಶ ಕಾಪಾಡಬೇಕು:
ನೀವು ನಡೆಯುವ ಅಥವಾ ಯಾವುದೇ ವ್ಯಾಯಾಮ ಮಾಡುವುದಾದರೂ ದೇಹದಲ್ಲಿ ನೀರಿನಂಶ ಕಾಪಾಡಬೇಕು. ಬಾಟಲಿ ನೀರನ್ನು ಕೊಂಡೊಯ್ಯಿರಿ, ಇಲ್ಲದಿದ್ದರೆ ಸಂಜೆ ಒಂದು ಎಳನೀರು ಕುಡಿದು ವ್ಯಾಯಾಮ ಮಾಡಿದರೆ ದೇಹದಲ್ಲಿ ನೀರಿನಂಶ ಕಡಿಮೆಯಾಗಲ್ಲ, ವ್ಯಾಯಾಮ ಮಾಡಲು ಎನರ್ಜಿ ಸಿಗುವುದು.
ಸಡಿಲವಾದ ಡ್ರೆಸ್ ಧರಿಸಿ:
ಬೇಸಿಗೆ ಕಾಲದಲ್ಲಿ ನೀವು ಸಡಿಲವಾದ ಕಾಟನ್ ಡ್ರೆಸ್ ಧರಿಸಿ ವ್ಯಾಯಾಮ ಮಾಡಿ, ಬಿಗಿಯಾದ ಉಡುಪು ಧರಿಸಿದರೆ ಮೈ ಹೆಚ್ಚಾಗಿ ಬೆವರುವುದು, ಆದ್ದರಿಂದ ಈ ಬಗ್ಗೆ ಗಮನಹರಿಸಿ.
ನಿಮ್ಮ ದೇಹದ ಮಾತು ಕೇಳಿ:
ಇನ್ನು ನೀವು ವ್ಯಾಯಾಮ ಮಾಡುವಾಗ ನೀವು ನಿಮ್ಮ ದೇಹದ ಮಾತು ಕೇಳಬೇಕು. ಆದ್ದರಿಂದ ನಿಮ್ಮ ದೇಹ ನನ್ನಿಂದ ಆಗಲ್ಲ ಎಂದು ಸೂಚಿಸಿದರೆ ಮತ್ತೆ ವರ್ಕೌಟ್ ಮಾಡಬೇಡಿ. ನಮ್ಮ ದೇಹದ ಮಾತು ಕೇಳಬೇಕು, ಆಗುತ್ತಿಲ್ಲ ಎಂದು ದೇಹ ಸೂಚನೆ ಕೊಟ್ಟಾಗ ಮತ್ತೆ ಒತ್ತಡ ಹಾಕಿ ವರ್ಕೌಟ್ ಮಾಡಲು ಹೋಗಬಾರದು.
ದೇಹದಲ್ಲಿ ನೀರಿನಂಶ ಕಡಿಮೆಯಿದ್ದಾಗ ವ್ಯಾಯಾಮ ಮಾಡಬೇಡಿ:
ತಲೆನೋವು:
ನೀವು ನೀರು ತುಂಬಾ ಕಡಿಮೆ ಕುಡಿದರೆ ತಲೆನೋವು ಉಂಟಾಗುವುದು, ಆದ್ದರಿಂದ ಬೇಸಿಗೆಯಲ್ಲಿ ತಲೆನೋವು ಉಂಟಾದರೆ ಮೊದಲು ನೀವು ಮಾಡಬೇಕಾಗಿರುವುದು ನೀರು ಅಧಿಕ ಕುಡಿಯುವುದು. ಮೂತ್ರ ತುಂಬಾ ಹಳದಿ ಬಣ್ಣದಲ್ಲಿದ್ದರೆ ದೇಹದಲ್ಲಿ ನೀರಿನಂಶ ಕಡಿಮೆಯಾಗಿದೆ ಎಂಬುವುದರ ಲಕ್ಷಣಗಳಾಗಿವೆ. ಆದ್ದರಿಂದ ಮೂತ್ರದ ಬಣ್ಣ ನೋಡಿ ನಿಮ್ಮ ದೇಹಕ್ಕೆ ನೀರಿನಂಶದ ಅವಶ್ಯಕತೆ ಇದೆಯೇ ಎಂಬುವುದನ್ನು ತಿಳಿಯಬಹುದು. ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ವ್ಯಾಯಾಮ ಮಾಡಬೇಡಿ ನೀರನ್ನು ಕುಡಿಯಿರಿ ತಣ್ಣೀರಿನಲ್ಲಿ ಸ್ನಾನ ಮಾಡಿ ಬಟ್ಟೆಯನ್ನು ಒದ್ದೆ ಮಾಡಿ ಕತ್ತಿನ ಭಾಗದಲ್ಲಿ ಇಡಿ ತುಂಬಾನೇ ಸುಸ್ತು ಅನಿಸಿದಾಗ ವೈದ್ಯರನ್ನು ಭೇಟಿ ಮಾಡಿ.